ಕೊಡುಗೆ ಚೀಟಿಗಳು

ವ್ಯಾಪಾರಗಾರರು ತಮ್ಮ ಸರಕುಗಳ ವಿಕ್ರಯವನ್ನು ಹೆಚ್ಚಿಸಲು ಕೈಗೊಳ್ಳುವ ಜಾಹೀರಾತಿನ ಒಂದು ಸಾಧನ (ಗಿಫ್ಟ್ ಕೂಪನ್ಸ್). ಸರಕುಗಳ ಸಂಗಡವೇ ಅವುಗಳ ಪೊಟ್ಟಣ ಅಥವಾ ಡಬ್ಬಿಯಲ್ಲಿ ಈ ಚೀಟಿಗಳನ್ನು ಇಟ್ಟಿರುತ್ತಾರೆ. ಇಂಥ ಚೀಟಿಗಳಲ್ಲಿ ಎರಡು ವಿಧ : 1. ನಿಜಮೌಲ್ಯವುಳ್ಳವುಗಳು; ಉದಾಹರಣೆಗೆ ಚಲನಚಿತ್ರತಾರೆಯರ ಅಥವಾ ಕ್ರಿಕೆಟ್ ಆಟಗಾರರ ಚಿತ್ರಗಳು; ಅನೇಕರಿಗೆ ಇಂಥ ಚಿತ್ರಗಳನ್ನು ಸಂಗ್ರಹಿಸುವ ಹವ್ಯಾಸವಿರುತ್ತದೆ. ಯಾವ ವಸ್ತುಗಳ ಸಂಗಡ ಚಿತ್ರಗಳು ದೊರಕುತ್ತವೆಯೋ ಅಂಥ ವಸ್ತುಗಳನ್ನು ಅವರು ಕೊಳ್ಳಬಯಸುತ್ತಾರೆ. ಇದರಲ್ಲೊಂದು ಅನಾನುಕೂಲವುಂಟು. ಕೆಲವರಿಗೆ ತಮಗೆ ಬೇಕಾದ ಚಿತ್ರಗಳು ಸಿಗದೆ ಹೋಗಬಹುದು ಅಥವಾ ಒಂದೇ ರೀತಿಯ ಚಿತ್ರಗಳು ಮತ್ತೆ ಮತ್ತೆ ಸಿಗಬಹುದು. ಅಂಥ ಸಂದರ್ಭದಲ್ಲಿ ತಮಗೆ ಬೇಕಾದ ಚಿತ್ರಗಳನ್ನು ಬೇರೆಯವರಿಂದ ಪಡೆದು, ತಮ್ಮಲ್ಲಿರುವ ಚಿತ್ರಗಳನ್ನು ಅವರಿಗೆ ಕೊಟ್ಟು ಪರಸ್ಪರ ಚಿತ್ರಗಳ ವಿನಿಮಯ ಮಾಡಿಕೊಳ್ಳುವುದು ಸಾಧ್ಯ. 2. ಕೊಡುಗೆ ವಸ್ತುವಿಗೆ ವಿನಿಮಯ ಮಾಡಿಕೊಳ್ಳಬಹುದಾದ ಚೀಟಿಗಳು ಇನ್ನೊಂದು ಬಗೆ. ಸರಕುಗಳೊಂದಿಗೆ ಇರುವ ಚೀಟಿಗಳ ನಿಗದಿಯಾದಷ್ಟು ಸಂಖ್ಯೆಯನ್ನು ಕೂಡಿಸಿದ ಮೇಲೆ ಅವುಗಳಿಗೆ ವಿನಿಮಯವಾಗಿ ಒಂದು ಉಪಯುಕ್ತವಸ್ತುವನ್ನು ಪಡೆಯಬಹುದು. ಎಷ್ಟು ಚೀಟಿಗಳಿಗೆ ಒಂದು ವಸ್ತುವನ್ನು ಪಡೆಯಬಹುದು ಎಂಬುದನ್ನು ಮೊದಲೇ ತಿಳಿಸಿರುತ್ತಾರೆ. ಚೀಟಿಗಳನ್ನು ಕೊಡುಗೆ ವಸ್ತುವಿಗೆ ವಿನಿಮಯ ಮಾಡಿಕೊಳ್ಳುವುದಕ್ಕೆ ಕಾಲದ ಅವಧಿಯನ್ನೂ ನಿಗದಿಮಾಡಿರುವುದುಂಟು. ಒಂದು ವಸ್ತುವನ್ನು ಕೊಡುಗೆಯ ರೂಪದಲ್ಲಿ ಪಡೆಯಲು ಎಷ್ಟು ಚೀಟಿಗಳು ಬೇಕಾಗುತ್ತವೆಯೆಂದು ನಿರ್ಧರಿಸಲಾಗಿದೆಯೋ ಅಷ್ಟು ಚೀಟಿಗಳನ್ನು ಕೂಡಿಡುವುದಕ್ಕಾಗಲಿ, ತಮಗೆ ಬೇಕಾದ ಚಲನಚಿತ್ರ ತಾರೆಯರ ಅಥವಾ ಕ್ರಿಕೆಟ್ ಆಟಗಾರರ ಚಿತ್ರಗಳನ್ನು ಕೂಡಿಸುವುದಕ್ಕಾಗಲಿ ಜನರು ಪುನಃಪುನಃ ಅದೇ ಸರಕುಗಳನ್ನು ಕೊಳ್ಳುತ್ತಾರೆ. ಇದರಿಂದ ಆ ಸರಕಿಗೆ ಬೇಡಿಕೆ ಏಕಪ್ರಕಾರವಾಗಿರುತ್ತದೆ.

	ಕೊಡುಗೆ ಚೀಟಿಗಳನ್ನು ಜಾಹೀರಾತು ಸಾಧನವನ್ನಾಗಿ ಉಪಯೋಗಿಸುವುದರಲ್ಲಿ ಕೆಲವು ಕೊರತೆಗಳು ಉಂಟು. ಮೊದಲನೆಯದಾಗಿ ಎಲ್ಲ ಬಗೆಯ ಸರಕುಗಳ ವಿಕ್ರಯದಲ್ಲೂ ಇವನ್ನು ಉಪಯೋಗಿಸುವುದಕ್ಕಾಗುವುದಿಲ್ಲ. ಶೀಘ್ರವಾಗಿ ಬಳಸಬಹುದಾದ ಸಿಗರೇಟ್, ಚಾಕಲೇಟ್, ಕಾಫಿ, ಚಹ ಮುಂತಾದುವುಗಳ ವಿಕ್ರಯದಲ್ಲಿ ಕೊಡುಗೆ ಚೀಟಿಗಳನ್ನು ಉಪಯೋಗಿಸಬಹುದು. ಎರಡನೆಯದಾಗಿ, ಕೊಡುಗೆಯಾಗಿ ನೀಡಬೇಕಾದ ವಸ್ತು ತಕ್ಕಮಟ್ಟಿಗೆ ಬೆಲೆ ಬಾಳುವಂಥದಾಗಿರಬೇಕು.

	ಕೊಡುಗೆ ಚೀಟಿಗಳು ವ್ಯಾಪಾರಿ, ಅನುಭೋಗಿ ಇಬ್ಬರಿಗೂ ಲಾಭದಾಯಕ. ಇವುಗಳಿಂದ ವ್ಯಾಪಾರಿಯ ಸರಕುಗಳಿಗೆ ಬೇಡಿಕೆ ಹೆಚ್ಚುತ್ತದೆ. ಅನುಭೋಗಿಗೆ ಪರೋಕ್ಷವಾಗಿ ಸರಕಿನ ಬೆಲೆಯಲ್ಲಿ ವಟ್ಟ ಲಭ್ಯವಾದಂತಾಗುತ್ತದೆ.

	ಕೊಡುಗೆ ಚೀಟಿಗಳನ್ನು ನೀಡುವುದರಲ್ಲಿ ವ್ಯಾಪಾರಿ ಎಚ್ಚರಿಕೆ ವಹಿಸಬೇಕು. ವಿವೇಚನೆಯಿಲ್ಲದೆ ಅವನ್ನು ನೀಡಿದರೆ ವ್ಯಾಪಾರಕ್ಕೆ ಯೋಗ್ಯವಲ್ಲದ ವಸ್ತುಗಳನ್ನು ವಿಲೇವಾರಿ ಮಾಡುವುದಕ್ಕಾಗಿ ಈ ಉಪಾಯ ಹೂಡಲಾಗಿದೆಯೆಂಬ ಭಾವನೆ ಜನಕ್ಕೆ ಉಂಟಾಗಬಹುದು.

	ಭಾರತದಲ್ಲಿ ಹಲವು ಹೆಸರಾಂತ ಕಂಪನಿಗಳು ವ್ಯಾಪಾರವನ್ನು ಹೆಚ್ಚಿಸುವುದಕ್ಕಾಗಿ ಕೊಡುಗೆ ಚೀಟಿಗಳ ವಿಧಾನವನ್ನು ಅನುಸರಿಸುತ್ತಿವೆ. 								  		(ಜಿ.ಕೆ.ಐ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ